ಅತಿಮಧುರ
	
ಫ್ಯಾಬೇಸೀ ಕುಟುಂಬದ ಫ್ಯಾಬಾಯ್ಡೀ (ಪ್ಯಾಪಿಲಿಯೊನಾಯ್ಡೀ) ಉಪಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಯಷ್ಟಿಮಧುಕ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಇದನ್ನು ಲಿಕರೈಸ್ ಎಂದು ಕರೆಯಲಾಗುತ್ತದೆ. ಗ್ಲೈಸಿರೈಜ ಗ್ಲಾಬ್ರ ಇದರ ಸಸ್ಯ ವೈಜ್ಞಾನಿಕ ನಾಮ. ಇದು ಮುಖ್ಯವಾಗಿ ಮೆಡಿಟರೇನಿಯನ್ ದೇಶಗಳು ಮತ್ತು ಚೀನ ದೇಶದ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ. ನಮ್ಮ ದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವುದಿಲ್ಲ. ಶ್ರೀನಗರ, ಬಾರಾಮುಲ್ಲ, ಜಮ್ಮು, ಡೆಹ್ರಾಡೂನ್, ಮತ್ತು ಡೆಲ್ಲಿ ಪ್ರದೇಶಗಳಲ್ಲಿ ಬೆಳೆಸುವ ಪ್ರಯತ್ನಗಳು ನಡೆದಿವೆ. ಸಮಶೀತೋಷ್ಣ ಹವೆಯಿರುವ ಹಿಮಾಲಯಪ್ರದೇಶಗಳಲ್ಲಿ, ದಕ್ಷಿಣ ಭಾರತದ ಬೆಟ್ಟಗುಡ್ಡ ಪ್ರದೇಶಗಲ್ಲಿ ಈ ಸಸ್ಯ ಚೆನ್ನಾಗಿ ಬೆಳೆಯಬಲ್ಲುದೆಂದು ಕಂಡುಬಂದಿದೆ. ಇದು ಚಿಕ್ಕ ಪೊದೆಯಂತಿದ್ದು, ಸುಮಾರು 2 ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ಬಿಡಿಬಿಡಿಯಾಗಿರುತ್ತವೆ. ಹೂಗಳು ಸ್ಪೈಕ್ ಮಾದರಿಯ ಹೂಗೊಂಚಲುಗಳಲ್ಲಿರುವುವು. ಇವು ಪಾಟಲ ವರ್ಣದವು. ಕಾಯಿಗಳು ಚಪ್ಪಟೆ. ಬೀಜಗಳು ಮೂತ್ರ ಪಿಂಡದಾಕಾರದಲ್ಲಿವೆ. ನೆಲದೊಳಗಡೆ ಇರುವ ಇದರ ಗುಪ್ತಕಾಂಡ ಮತ್ತು ಬೇರಿನ ಭಾಗಗಳು ಕೆಲವು ಬಗೆಗಳಲ್ಲಿ ಕವಲೊಡೆದಿರುತ್ತವೆ. ಒಣಗಿದ ಹೊರಕವಚ, ಸುಲಿದ ಅಥವಾ ಸುಲಿಯದಿರುವ ಬೇರು ಮತ್ತು ಗುಪ್ತಕಾಂಡದ ಭಾಗಗಳೇ ಅತಿಮಧುರ (ಲಿಕರೈಸ್) ಅಥವಾ ಯಷ್ಟಿಮಧುಕ ಬೇರುಗಳಾಗಿವೆ
	
ಅತಿಮಧುರ ಒಣಹವೆಯೂ ಚೆನ್ನಾದ ಬಿಸಿಲು ಇರುವಂಥ ಪ್ರದೇಶಗಳ ಹಸಿಯಾದ ನೆಲದಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೆಲವನ್ನು ಹದಮಾಡಿ, ಹೆಚ್ಚು ಗೊಬ್ಬರ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತದೆ. ನೆಟ್ಟ 3-4 ವರ್ಷಗಳಲ್ಲೇ ಬೇರುಗಳು ಕುಯ್ಲಿಗೆ ಬರುತ್ತವೆ. ಚೆನ್ನಾಗಿ ಬೆಳೆದಲ್ಲಿ, ಉತ್ಪಾದನೆ ಎಕರೆಗೆ 60 ಮಣಗಳಷ್ಟಾಗುತ್ತದೆ. 
	
ಅತಿಮಧುರದ ಪ್ರಬೇಧವಾದ ಗ್ಲಾಬ್ರದಲ್ಲಿ ಅನೇಕ ಬಗೆಗಳಿವೆ. ಇವುಗಳಲ್ಲಿ ಟಿಪಿಕಾ ಎಂಬುದು ಸ್ಪೇನ್ ಮತ್ತು ಸಿಸಿಲಿಗಳಲ್ಲಿ ಬೆಳೆಯುವ ಬಗೆ. ತನ್ನದೇ ಆದ ವಿಶಿಷ್ಟವಾಸನೆಯಿಂದ ಕೂಡಿ ಸ್ವಲ್ಪವೂ ಕಹಿಯಾಗಿರದೆ ಬಹು ಮಧುರವಾಗಿರುತ್ತದೆ. ಬಣ್ಣ ಕಡುಗೆಂಪು ಅಥವಾ ನೀಲಿಮಿಶ್ರಿತ ಕಂದು. ಮಾರುಕಟ್ಟೆಗಳ ಎಲ್ಲ ಅತಿ ಮಧುರದ ಬಗೆಗಳಿಗಿಂತಲೂ ಇದಕ್ಕೆ ಹೆಚ್ಚು ಬೇಡಿಕೆ ಮತ್ತು ಬೆಲೆ ಇವೆ. ಇರಾಕಿನಲ್ಲಿ ಗ್ಲಾಬ್ರದ ಇನ್ನೊಂದು ಬಗೆ ವಯೊಲೇಸಿಯಾವನ್ನು ಹೆಚ್ಚು ಬೆಳೆಯುತ್ತಾರೆ. ಬೇರೆ ಎಲ್ಲ ವಿಧಗಳಿಗಿಂತಲೂ ಇದು ಹೆಚ್ಚು ದಪ್ಪವಾಗಿದ್ದು, ಹೊರಕವಚಸಹಿತವಾಗಿಯೇ ಮಾರಾಟವಾಗುತ್ತದೆ. ರಷ್ಯದಲ್ಲಿ ಗ್ಲಾಬ್ರದ ಇನ್ನೊಂದು ಬಗೆ ಗ್ಲಾಂಡುಲಿಫೆರ ಸಿಕ್ಕುತ್ತದೆ. ಹೆಚ್ಚಾಗಿ ಕಾಡುಗಳಿಂದ ಸಂಗ್ರಹಿಸುವ ಈ ಗಿಡದ ಗುಪ್ತಕಾಂಡಗಳು 10 ಉದ್ದವಾಗಿದ್ದು, 2 ದಪ್ಪವಾಗಿರುತ್ತದೆ. ಬಣ್ಣ ತಿಳಿಗೆಂಪು. ತಿನ್ನುವಾಗ ರುಚಿಯಾಗಿದ್ದರೂ ತಿಂದಮೇಲೆ ಕಹಿ ಎನಿಸುತ್ತದೆ. 
	
ಅತಿಮಧುರದಲ್ಲಿ, ಮಧುರವಾದ ರುಚಿ ಇರುವುದಕ್ಕೆ ಮುಖ್ಯ ಕಾರಣ ಅದರಲ್ಲಿರುವ ಗ್ಲೈಸಿರ್ಹೈಸಿನ್ ಎಂಬ ವಸ್ತು. ಬೇರೆ ಬೇರೆ ಬಗೆಗಳಲ್ಲಿ 2%-14% ಭಾಗಗಳಿರುವ ಈ ವಸ್ತು ಸಸ್ಯದ ಮೇಲ್ಭಾಗಗಳಲ್ಲಿ ಕಂಡುಬರುವುದಿಲ್ಲ. ಜೊತೆಗೆ ಸುಮಾರು 3.8% ಗ್ಲುಕೋಸ್, 2.4%-6.5% ಸುಕ್ರೋಸ್, 30% ಪಿಷ್ಠಪದಾರ್ಥ, ಅಸ್ಫರಜಿನ್, ರೈಸಿನ್, ಕಹಿಪದಾರ್ಥಗಳು ಮತ್ತು ಸ್ವಲ್ಪಮಟ್ಟಿಗೆ ಎಣ್ಣೆ ಇರುತ್ತವೆ. ಅತಿಮಧುರದಲ್ಲಿ ಗ್ಲೈಸಿರ್ಹೈಸಿನ್, ಗ್ಲಿಸಿರ್ಹೈಸಿಕ್ ಆಮ್ಲದ ಕ್ಯಾಲ್ಸಿಯಂ ಅಥವಾ ಪೊಟಾಸಿಯಂ ಲವಣದ ರೂಪದಲ್ಲಿರುತ್ತದೆ. ಈ ವಸ್ತು ಸಿಹಿಯಲ್ಲಿ ಸಕ್ಕರೆಯನ್ನು 50 ಪಟ್ಟು ಮೀರಿಸುತ್ತದೆ. 20,000 ಭಾಗದಲ್ಲಿ ಒಂದು ಭಾಗದಷ್ಟು ಈ ವಸ್ತು ಇದ್ದರೂ ಅದರ ಸಿಹಿಯನ್ನು ನಾವು ಗುರುತಿಸಬಹುದು. 
	
ಅತಿಮಧುರ ಬಹಳ ಉಪಯುಕ್ತ ವಸ್ತು. ಇದನ್ನು ಮುಖ್ಯವಾಗಿ ಗಂಟಲಿನ ಉರಿ, ಶ್ಲೇಷಪದರದ ಉರಿ, ಮೂತ್ರವಿಸರ್ಜನೆಗೆ ಸಂಬಂಧಪಟ್ಟ ಅಂಗಗಳ ಉರಿ, ಕೆಮ್ಮು ಮುಂತಾದುವುಗಳಿಗೆ ಉಪಯೋಗಿಸುತ್ತಾರೆ. ಕೆಮ್ಮಿನ ಎಲ್ಲ ಕಷಾಯಗಳಲ್ಲೂ ಕೆಮ್ಮಿದಾಗ ಚೀಪಲು ಕೊಡುವ ಎಲ್ಲ ಮಾತ್ರೆಗಳಲ್ಲೂ ಅತಿಮಧುರವಿದ್ದೇ ಇರುತ್ತದೆ. ಕಷಾಯಗಳಿಗೆ ಮತ್ತು ಇನ್ನಿತರ ಔಷಧಿಗಳಿಗೆ ಇದು ಒಳ್ಳೆಯ ವಾಸನೆ ಕೊಡುತ್ತದೆ. ಅತಿಮಧುರ ಲಘುವಿರೇಚಕವೂ ಹೌದು. ಅತಿಮಧುರದ ಸಾರಕ್ಕೆ ಕರುಳಿನ ಹುಣ್ಣನ್ನು ಗುಣಪಡಿಸುವ ಶಕ್ತಿ ಇದೆ. ಈ ರಸ ಕರುಳಿನಲ್ಲಿ ಹೈಡ್ರೊಕ್ಲೋರಿಕ್ ಆಮ್ಲದ ಉತ್ಪತ್ತಿಯನ್ನು ತ್ವರಿತಗೊಳಿಸುತ್ತದೆ. ಅತಿಮಧುರವನ್ನು ವೀಳೆಯದೆಲೆಯೊಂದಿಗೆ ಹಾಕಿಕೊಳ್ಳುವ ಅಭ್ಯಾಸ ಇದೆ. ಇದರ ಪುಡಿಯನ್ನು ತುಪ್ಪ ಮತ್ತು ಜೇನು ತುಪ್ಪದೊಂದಿಗೆ ಬೆರಸಿ ಗುಣಪಡಿಸಲು ಉಪಯೋಗಿಸುತ್ತಾರೆ. 												   (ಕೆ.ಬಿ.ಎಸ್.)
	
ಮಾತ್ರೆಗಳಲ್ಲಿ ಪುಡಿಮದ್ದುಗಳನ್ನು ಹಿಡಿದಿಡಲು ಅತಿಮಧುರದ ಸಾರಕ ಬಳಕೆಯಲ್ಲಿತ್ತು. ಮೆತುವಿರೇಚಕವಾಗಿ ಮಕ್ಕಳಿಗೂ ಬಸುರಿಯರಿಗೂ ಇದನ್ನು ಕೊಡುವುದುಂಟು. ಇದಕ್ಕೆ ಮೆತುಲದ (ಡೆಮಲ್ಸೆಂಟ್) ಗುಣಗಳು ಇರುವುವಾದರೂ ಇದು ಸಿಹಿಯಾಗಿರುವುದರಿಂದ, ಓಕರಿಕೆ ಬರಿಸುವ ಹಲವಾರು ಮದ್ದುಗಳ ಕಹಿಯನ್ನು ಚೆನ್ನಾಗಿ ಮುಚ್ಚಲು ಇದರ ಸಿದ್ಧರಸವೂ (ಎಲಿಕ್ಸರ್) ಸೀಪಾಕವೂ (ಸಿರಪ್) ಹೆಚ್ಚು ಬಳಕೆಯಲ್ಲಿವೆ.
									        (ಡಿ.ಎಸ್.ಎಸ್.)
 
(ಪರಿಷ್ಕರಣೆ: ಕೆ.ಬಿ.ಸದಾನಂದ)